ಚೆನ್ನೈ: ತಮಿಳುನಾಡಿನ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡುವ ಭಕ್ತರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ದೇವಾಲಯಗಳ ಒಳಗೆ ಮೊಬೈಲ್ ಫೋನ್ ಕೊಂಡೊಯ್ಯುವುದರ ಮೇಲೆ ಹೇರಲಾಗಿದ್ದ ಸಂಪೂರ್ಣ ನಿಷೇಧವನ್ನು ಸಡಿಲಿಸಲು ನಿರ್ಧರಿಸಲಾಗಿದೆ. ಹೊಸ ನಿಯಮದ ಪ್ರಕಾರ, ಭಕ್ತರು ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿ ದೇವಾಲಯದ ಆವರಣದೊಳಗೆ ಕೊಂಡೊಯ್ಯಲು ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ.
ದೇವಾಲಯಗಳ ಪವಿತ್ರತೆ ಕಾಪಾಡುವ ಉದ್ದೇಶದಿಂದ ಸೆಪ್ಟೆಂಬರ್ 1ರಿಂದ ತಮಿಳುನಾಡಿನ 52 ಪ್ರಮುಖ ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಮದುರೈ ಮೀನಾಕ್ಷಿ ಅಮ್ಮನ್ ದೇವಾಲಯ, ರಾಮೇಶ್ವರಂ ರಾಮನಾಥಸ್ವಾಮಿ ದೇವಾಲಯ, ಪಳನಿ ಮುರುಗನ್ ದೇವಾಲಯ, ಶ್ರೀರಂಗಂ ರಂಗನಾಥಸ್ವಾಮಿ ದೇವಾಲಯ ಸೇರಿದಂತೆ ಹಲವು ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಈ ನಿಯಮ ಜಾರಿಯಲ್ಲಿತ್ತು.
ಮೊಬೈಲ್ ನಿಷೇಧದ ಹಿನ್ನೆಲೆಯಲ್ಲಿ ದೇವಾಲಯಗಳ ಹೊರಗೆ ಫೋನ್‌ಗಳನ್ನು ಇಡಲು ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಪ್ರತಿ ಮೊಬೈಲ್‌ಗೆ 5 ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ದರ್ಶನ ಮುಗಿದ ಬಳಿಕ ಮೊಬೈಲ್ ಹಿಂಪಡೆಯಲು ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಇದರಿಂದ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳೊಂದಿಗೆ ಬರುವ ಕುಟುಂಬಗಳು ತೊಂದರೆ ಅನುಭವಿಸುತ್ತಿದ್ದವು.
ಭಕ್ತರ ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಮೊಬೈಲ್ ನಿಷೇಧದ ನಿಯಮವನ್ನು ಸಡಿಲಿಸಿದೆ ಎನ್ನಲಾಗಿದೆ. ಇನ್ಮುಂದೆ ಭಕ್ತರು ತಮ್ಮ ಮೊಬೈಲ್‌ಗಳನ್ನು ಜೊತೆಯಲ್ಲೇ ಕೊಂಡೊಯ್ಯಬಹುದು. ಆದರೆ ದೇವಾಲಯ ಪ್ರವೇಶಿಸುವ ಮುನ್ನವೇ ಫೋನ್ ಸ್ವಿಚ್ ಆಫ್ ಮಾಡುವುದು ಕಡ್ಡಾಯವಾಗಿದೆ.

ಇನ್ನು ಮೊಬೈಲ್ ಕೊಂಡೊಯ್ಯಲು ಅವಕಾಶ ನೀಡಲಾಗಿದೆ ಎಂದ ಮಾತ್ರಕ್ಕೆ ದೇವಸ್ಥಾನದೊಳಗೆ ಫೋಟೋ ತೆಗೆಯುವಂತಿಲ್ಲ. ವಿಡಿಯೊ ಚಿತ್ರೀಕರಣ, ಸೆಲ್ಫಿ ಹಾಗೂ ರೀಲ್ಸ್ ಮಾಡುವುದರ ಮೇಲಿನ ನಿಷೇಧ ಮುಂದುವರಿಯಲಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ, ದೇವಾಲಯಗಳಿಗೆ ಮೊಬೈಲ್ ಕೊಂಡೊಯ್ಯಲು ಅವಕಾಶ ನೀಡಿರುವ ನಿರ್ಧಾರ ಭಕ್ತರಿಗೆ ಸಮಾಧಾನ ತಂದಿದ್ದು, ದರ್ಶನದ ವೇಳೆ ಅನುಭವಿಸುತ್ತಿದ್ದ ಅನಗತ್ಯ ತೊಂದರೆಗಳು ಕಡಿಮೆಯಾಗುವ ನಿರೀಕ್ಷೆಯಿದೆ.