ಅಕ್ಷರ ಗಾತ್ರ

ಉಚಿತ ಗ್ಯಾರಂಟಿ ಯೋಜನೆ ಒಂದು ಕಡೆ, ಬೆಲೆ ಏರಿಕೆ ಮತ್ತೊಂದು ಕಡೆ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ

Bengaluru ನಲ್ಲಿರುವ ಕರ್ನಾಟಕ ಹೈಕೋರ್ಟ್ ಕಟ್ಟಡದ ಕೆಂಪು ಮುಂಭಾಗ.

ಬೆಂಗಳೂರು: ರಾಜ್ಯ ಸರ್ಕಾರ ಒಂದು ಕಡೆ ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೆ, ಮತ್ತೊಂದೆಡೆ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ಇದರಿಂದ ಸಾಮಾನ್ಯ ಜನರು ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಉಚಿತ ಯೋಜನೆಗಳ ಘೋಷಣೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವಿನ ವ್ಯತ್ಯಾಸವನ್ನು ಪ್ರಶ್ನಿಸಿರುವ ನ್ಯಾಯಪೀಠ, ಸರ್ಕಾರದ ನೀತಿಗಳ ಬಗ್ಗೆ ಕಳವಳ ಹೊರಹಾಕಿದೆ.

ಅರ್ಜಿಯೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಶ್ರೀಶಾನಂದ ಅವರಿದ್ದ ನ್ಯಾಯಪೀಠ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಯೋಜನೆ ಉಚಿತ, ಆದರೆ ಬೆಲೆ ಏರಿಕೆ ಖಚಿತ ಎಂದು ವ್ಯಂಗ್ಯವಾಡಿದ ನ್ಯಾಯಪೀಠ, ಸರ್ಕಾರದ ಎಲ್ಲ ಯೋಜನೆಗಳೂ ಇದೇ ರೀತಿಯಲ್ಲಿವೆಯೇ ಎಂದು ಪ್ರಶ್ನಿಸಿದೆ.

ಕೆ.ಜಿ. ತುಪ್ಪದ ಬೆಲೆ 850 ರೂಪಾಯಿ!

ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು, ಕಳೆದ ತಿಂಗಳು ಒಂದು ಕೆ.ಜಿ. ತುಪ್ಪದ ಬೆಲೆ 650 ರೂಪಾಯಿ ಇತ್ತು. ಆದರೆ ಈಗ ಅದೇ ತುಪ್ಪದ ಬೆಲೆ 850 ರೂಪಾಯಿಗೆ ಏರಿಕೆಯಾಗಿದೆ ಎಂದು ಉದಾಹರಣೆ ನೀಡಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ಯಮದೀಪ ಹಚ್ಚುವ ಸಂಪ್ರದಾಯವಿದೆ. ಆದರೆ ತುಪ್ಪದ ಬೆಲೆ ಇಷ್ಟೊಂದು ಹೆಚ್ಚಾದರೆ ಜನರು ಯಮದೀಪ ಹಚ್ಚುವುದಾದರೂ ಹೇಗೆ? ಯಮದೀಪ ಹಚ್ಚುವ ಬದಲು ನನ್ನನ್ನೇ ಕರೆದುಕೊಂಡು ಹೋಗು ಎಂದು ಯಮನಿಗೆ ಹೇಳಬೇಕಷ್ಟೇ ಎಂದು ನ್ಯಾಯಮೂರ್ತಿಗಳು ವ್ಯಂಗ್ಯಭರಿತವಾಗಿ ಹೇಳಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಹೀಗೆಯೇ ಏರಿಕೆಯಾಗುತ್ತಿದ್ದರೆ ಸಾಮಾನ್ಯ ಜನರು ಜೀವನ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಅಕ್ಕಿ, ಹಾಲು, ಬಸ್ ಟಿಕೆಟ್ ದರವೂ ಏರಿಕೆ!

ಪ್ರತಿ ಕೆ.ಜಿ. ಅಕ್ಕಿಯ ಬೆಲೆ 103 ರೂಪಾಯಿಗೆ ತಲುಪಿರುವ ವಿಚಾರವೂ ನ್ಯಾಯಪೀಠದ ಗಮನಕ್ಕೆ ಬಂದಿದೆ. ಹಾಲಿನ ಬೆಲೆ ಹಾಗೂ ಬಸ್ ಟಿಕೆಟ್ ದರ ಹೆಚ್ಚಳದ ಬಗ್ಗೆಯೂ ನ್ಯಾಯಮೂರ್ತಿಗಳು ಪ್ರಸ್ತಾಪಿಸಿದ್ದಾರೆ.

ಒಂದು ಕಡೆ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದೆ. ಮತ್ತೊಂದೆಡೆ ದಿನಸಿ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ತೆರಳುವ ಜನರಿಗೆ ಬಸ್ ಟಿಕೆಟ್ ದರ ಏರಿಕೆಯ ಹೊರೆ ಕೂಡ ಬೀಳುತ್ತಿದೆ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.

ಸಕ್ಕರೆ ಬೆಲೆಯೂ 90 ರೂಪಾಯಿಗೆ ಏರಿಕೆಯಾಗುತ್ತಾ?

ರಾಜ್ಯ ಸರ್ಕಾರ ಕಬ್ಬಿಗೆ ಪ್ರತಿ ಟನ್‌ಗೆ 3,600 ರೂಪಾಯಿ ಬೆಂಬಲ ಬೆಲೆ ಘೋಷಿಸಿರುವ ವಿಚಾರವನ್ನೂ ನ್ಯಾಯಪೀಠ ಪ್ರಸ್ತಾಪಿಸಿದೆ. ಆದರೆ ದೀಪಾವಳಿ ಮುಗಿದ ಬಳಿಕ ಒಂದು ಕೆ.ಜಿ. ಸಕ್ಕರೆಯ ಬೆಲೆ 90 ರೂಪಾಯಿಗೆ ಏರಿಕೆಯಾಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಮೆಟ್ರೋ ಮತ್ತು ನಗರ ವರದಿಗಾರರು (City & Metro Reporter)

NTV ಕನ್ನಡ ಸಂಪಾದಕೀಯ ತಂಡ.