ಪ್ಯಾರಿಸ್: ಫ್ರಾನ್ಸ್ನಲ್ಲಿ ಭುಗಿಲೆದ್ದಿರುವ ವಿದ್ಯಾರ್ಥಿಗಳ ಪ್ರತಿಭಟನೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ಆರಂಭವಾದ ಹೋರಾಟದ ಹಿಂದೆ ಜಾಗತಿಕ ಎಡಪಂಥೀಯ ಸಂಘಟನೆಗಳ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಅಮೆರಿಕದ ಫಾಕ್ಸ್ ನ್ಯೂಸ್ ಡಿಜಿಟಲ್ ನಡೆಸಿದ ತನಿಖಾ ವರದಿಯಲ್ಲಿ ಬರೋಬ್ಬರಿ 50 ಸಂಘಟನೆಗಳ ಪಾತ್ರವನ್ನು ಪ್ರಸ್ತಾಪಿಸಲಾಗಿದ್ದು, ಈ ಜಾಲದ ಸಂಪರ್ಕದ ಚರ್ಚೆಯಲ್ಲಿ ಭಾರತದ ಹೆಸರೂ ಕೇಳಿಬಂದಿರುವುದು ಗಮನ ಸೆಳೆದಿದೆ.
ಫ್ರಾನ್ಸ್ನಲ್ಲಿ ಶಾಲೆಗಳ ದುಸ್ಥಿತಿ, ಶಿಕ್ಷಕರ ಕೊರತೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದರು. ಆದರೆ, ದಿನಗಳು ಕಳೆದಂತೆ ಈ ಹೋರಾಟಕ್ಕೆ ಕಾರ್ಮಿಕ ಸಂಘಟನೆಗಳು, ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳ ಬೆಂಬಲ ದೊರೆತಿದೆ. ಪ್ರತಿಭಟನೆಗಳು ಹಲವು ನಗರಗಳಿಗೆ ವ್ಯಾಪಿಸಿದ್ದು, ಕೆಲವು ಪ್ರದೇಶಗಳಲ್ಲಿ ಹಿಂಸಾಚಾರ ಹಾಗೂ ಪೊಲೀಸರೊಂದಿಗೆ ಘರ್ಷಣೆಗಳು ನಡೆದಿವೆ.
ಇನ್ನು, ಫಾಕ್ಸ್ ನ್ಯೂಸ್ ಡಿಜಿಟಲ್ ವರದಿ ಪ್ರಕಾರ, ಫ್ರಾನ್ಸ್ನ ವಿದ್ಯಾರ್ಥಿ ಪ್ರತಿಭಟನಾ ಚಳವಳಿ ಹಾಗೂ ಅದಕ್ಕೆ ಬೆಂಬಲ ನೀಡುತ್ತಿರುವ ವಿಶಾಲ ಜಾಲದಲ್ಲಿ ಒಟ್ಟು 50 ಸಂಘಟನೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಕೇವಲ 15 ಸಂಘಟನೆಗಳು ವಿದ್ಯಾರ್ಥಿ ಹಾಗೂ ಯುವ ಸಂಘಟನೆಗಳಾಗಿವೆ. ಉಳಿದ 35 ಸಂಘಟನೆಗಳಲ್ಲಿ ಕಾರ್ಮಿಕ ಒಕ್ಕೂಟಗಳು, ಕಮ್ಯುನಿಸ್ಟ್ ಮತ್ತು ಸಮಾಜವಾದಿ ಸಂಘಟನೆಗಳು, ರಾಜಕೀಯ ಪಕ್ಷಗಳು, ನಾಗರಿಕ ಹಕ್ಕುಗಳ ಸಂಘಟನೆಗಳು ಹಾಗೂ ವಿವಿಧ ಸಾಮಾಜಿಕ ಚಳವಳಿಗಳಲ್ಲಿ ತೊಡಗಿರುವ ಗುಂಪುಗಳು ಸೇರಿವೆ.

ಮತ್ತೊಂದು ಪ್ರಮುಖ ವಿಚಾರ ಅಂದರೆ, ಈ ಸಂಘಟನೆಗಳ ಸಂಪರ್ಕ ಫ್ರಾನ್ಸ್ಗೆ ಮಾತ್ರ ಸೀಮಿತವಾಗಿಲ್ಲ ಎಂಬುದು ಫಾಕ್ಸ್ ನ್ಯೂಸ್ ವರದಿಯ ಆರೋಪ. ಅಮೆರಿಕ, ಬ್ರಿಟನ್, ಗ್ರೀಸ್, ಬ್ರೆಜಿಲ್ ಹಾಗೂ ಭಾರತದಲ್ಲಿರುವ ಕೆಲವು ಸಂಘಟನೆಗಳೊಂದಿಗೆ ಈ ಚಳವಳಿಗೆ ಸಂಬಂಧಿಸಿದ ಬೆಂಬಲ ಜಾಲದ ಸಂಪರ್ಕವಿದೆ ಎಂದು ವರದಿ ಪ್ರಸ್ತಾಪಿಸಿದೆ. ಪ್ರತಿಭಟನೆಗಳಿಗೆ ಬೆಂಬಲಿಗರನ್ನು ಸಂಘಟಿಸುವುದು, ಮುಷ್ಕರಗಳಿಗೆ ಕರೆ ನೀಡುವುದು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಹೋರಾಟದ ಸಂದೇಶಗಳನ್ನು ಹರಡುವ ಚಟುವಟಿಕೆಗಳನ್ನು ವರದಿ ಗುರುತಿಸಿದೆ.
ಇನ್ನು, ಭಾರತದ ಸಂಪರ್ಕದ ವಿಚಾರದಲ್ಲಿ ಫ್ರಾನ್ಸ್ ಮೂಲದ ಇಂಡಿಯನ್ ಅಲಯನ್ಸ್ ಪ್ಯಾರಿಸ್ ಸಂಘಟನೆಯ ಹೆಸರೂ ಪ್ರಸ್ತಾಪವಾಗಿದೆ. ಫ್ರಾನ್ಸ್ನ ಪ್ರತಿಭಟನೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ವ್ಯಕ್ತಪಡಿಸಿರುವ ಈ ಸಂಘಟನೆ, ಭಾರತದಲ್ಲಿನ ವಿದ್ಯಾರ್ಥಿ ಹೋರಾಟಗಳೊಂದಿಗೂ ಹೋಲಿಕೆ ಮಾಡಿದೆ. ಆದರೆ, ಪ್ರತಿಭಟನೆಗಳಿಗೆ ಬೆಂಬಲ ವ್ಯಕ್ತಪಡಿಸಿರುವುದೇ ಹಿಂಸಾಚಾರದಲ್ಲಿ ಭಾಗಿಯಾಗಿರುವುದಕ್ಕೆ ಸಾಕ್ಷಿಯಲ್ಲ ಎಂಬುದನ್ನೂ ಗಮನಿಸಬೇಕಿದೆ.
ಆರಂಭದಲ್ಲಿ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಸೀಮಿತವಾಗಿದ್ದ ಪ್ರತಿಭಟನೆಗಳಲ್ಲಿ ಬಳಿಕ ಸರ್ಕಾರಿ ವೆಚ್ಚ ಕಡಿತ, ಬಂಡವಾಳಶಾಹಿ ವ್ಯವಸ್ಥೆ, ಪೊಲೀಸ್ ಕಾರ್ಯಾಚರಣೆ, ರಕ್ಷಣಾ ವೆಚ್ಚ ಹಾಗೂ ಇಸ್ರೇಲ್ಗೆ ಸಂಬಂಧಿಸಿದ ವಿಚಾರಗಳೂ ಚರ್ಚೆಗೆ ಬಂದಿವೆ. ವಿವಿಧ ಸಂಘಟನೆಗಳು ತಮ್ಮದೇ ಬೇಡಿಕೆಗಳೊಂದಿಗೆ ಹೋರಾಟಕ್ಕೆ ಬೆಂಬಲ ನೀಡಿರುವುದರಿಂದ ಪ್ರತಿಭಟನೆಯ ವ್ಯಾಪ್ತಿ ಮತ್ತಷ್ಟು ವಿಸ್ತರಿಸಿದೆ.
ಮತ್ತೊಂದೆಡೆ, ಫ್ರಾನ್ಸ್ನ ಹಲವು ನಗರಗಳಲ್ಲಿ ಪ್ರತಿಭಟನೆಗಳ ವೇಳೆ ಹಿಂಸಾಚಾರ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಹಾಗೂ ಪೊಲೀಸರೊಂದಿಗೆ ಘರ್ಷಣೆಗಳು ನಡೆದಿವೆ. ಫ್ರಾನ್ಸ್ ಸರ್ಕಾರ ಹಿಂಸಾಚಾರವನ್ನು ಖಂಡಿಸಿದ್ದು, ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ಗೌರವಿಸುವುದಾಗಿ ತಿಳಿಸಿದೆ. ವಿದ್ಯಾರ್ಥಿಗಳ ಮೂಲ ಬೇಡಿಕೆಗಳಾದ ಶಿಕ್ಷಣದ ಗುಣಮಟ್ಟ, ಶಿಕ್ಷಕರ ಕೊರತೆ ಹಾಗೂ ಶಾಲೆಗಳ ಮೂಲಸೌಕರ್ಯ ಸಮಸ್ಯೆಗಳೂ ಇನ್ನೂ ಪ್ರಮುಖ ಚರ್ಚೆಯ ವಿಷಯಗಳಾಗಿವೆ.
ಒಟ್ಟಿನಲ್ಲಿ, ಫ್ರಾನ್ಸ್ನ ವಿದ್ಯಾರ್ಥಿ ಪ್ರತಿಭಟನೆಗಳ ಹಿಂದೆ 50 ಸಂಘಟನೆಗಳ ವಿಶಾಲ ಬೆಂಬಲ ಜಾಲವಿದೆ ಎಂಬ ಫಾಕ್ಸ್ ನ್ಯೂಸ್ ವರದಿ ಹೊಸ ಚರ್ಚೆಗೆ ಕಾರಣವಾಗಿದೆ. ಈ ಜಾಲದ ಸಂಪರ್ಕದ ವಿಚಾರದಲ್ಲಿ ಭಾರತದ ಹೆಸೂ ಪ್ರಸ್ತಾಪವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಆದರೆ, ಸಂಘಟನೆಗಳ ನಡುವಿನ ಸಂಪರ್ಕ ಮತ್ತು ಪ್ರತಿಭಟನೆಯ ಹಿಂಸಾಚಾರವನ್ನು ಸಂಘಟಿಸಿದ ಆರೋಪ ಎರಡೂ ಪ್ರತ್ಯೇಕ ವಿಚಾರಗಳಾಗಿದ್ದು, ಆರೋಪಗಳ ಸಂಪೂರ್ಣ ಸತ್ಯಾಸತ್ಯತೆ ಇನ್ನಷ್ಟೇ ದೃಢಪಡಬೇಕಿದೆ.