ರಿಯಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್ ಬೆಂಬಲಿತ ಯೆಮೆನ್‌ನ ಹೌತಿ ಬಂಡುಕೋರರು ಹೇಳಿಕೊಂಡಿದ್ದಾರೆ.
ಈ ಬೆಳವಣಿಗೆಯಿಂದ ಈಗಾಗಲೇ ಉದ್ವಿಗ್ನವಾಗಿರುವ ಪ್ರದೇಶದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ವರದಿಗಳ ಪ್ರಕಾರ, ಕ್ಷಿಪಣಿ ದಾಳಿಯ ಬಳಿಕ ವಿಮಾನ ನಿಲ್ದಾಣದ ವಿಮಾನ ಕಾರ್ಯಾಚರಣೆಗಳಿಗೆ ಅಡ್ಡಿಯಾಗಿದೆ. ನಿಲುಗಡೆಗೊಂಡಿದ್ದ ವಿಮಾನವೊಂದರಿಂದ ದಟ್ಟವಾಗಿ ಹೊಗೆ ಬರುತ್ತಿರುವ ದೃಶ್ಯವೂ ಕಂಡುಬಂದಿದೆ ಎಂದು ವರದಿಯಾಗಿದೆ.
ಆದರೆ, ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟಗಳಿಗೆ ನಿಖರ ಕಾರಣವೇನು ಎಂಬುದನ್ನು ತಕ್ಷಣಕ್ಕೆ ಸ್ವತಂತ್ರವಾಗಿ ದೃಢಪಡಿಸಲು ಸಾಧ್ಯವಾಗಿಲ್ಲ. ಈ ಕುರಿತು ಸೌದಿ ಅಧಿಕಾರಿಗಳಿಂದಲೂ ತಕ್ಷಣದ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಇದೇ ವೇಳೆ, ವಿಮಾನಗಳ ಸಂಚಾರವನ್ನು ಪತ್ತೆಹಚ್ಚುವ ಫ್ಲೈಟ್‌ರಾಡಾರ್24 ಸಂಸ್ಥೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮತ್ತೆ ಬಂದ್ ಮಾಡಲಾಗಿದೆ ಎಂದು ತಿಳಿಸಿದೆ.

ಹೌತಿಗಳ ದಾಳಿ ನಡೆಯುವ ಸುಮಾರು ಒಂದೂವರೆ ಗಂಟೆಗೂ ಮುನ್ನ ವಿಮಾನ ನಿಲ್ದಾಣದಿಂದ ಕೊನೆಯ ಟೇಕಾಫ್ ನಡೆದಿತ್ತು ಎಂದು ವರದಿಗಳು ತಿಳಿಸಿವೆ. ಕಳೆದ ಕೆಲವು ದಿನಗಳಿಂದ ಸೌದಿ ಅರೇಬಿಯಾದ ವಿವಿಧ ಗುರಿಗಳ ಮೇಲೆ ದಾಳಿ ನಡೆಸಿರುವುದಾಗಿ ಹೌತಿ ಬಂಡುಕೋರರು ಪದೇಪದೇ ಹೇಳಿಕೊಂಡಿದ್ದಾರೆ.
ಇರಾನ್, ಸೌದಿ ಅರೇಬಿಯಾ ಮತ್ತು ಯೆಮೆನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ಘಟನೆ ನಡೆದಿರುವುದು ಮತ್ತಷ್ಟು ಗಮನ ಸೆಳೆದಿದೆ. ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಗಳ ಮೇಲೆ ಈ ಬೆಳವಣಿಗೆ ತಕ್ಷಣದ ಪರಿಣಾಮ ಬೀರಿದ್ದು, ಪರಿಸ್ಥಿತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.