ದೇಸಿ ತುಪ್ಪ ಭಾರತೀಯ ಆಹಾರ ಪದ್ಧತಿಯ ಅವಿಭಾಜ್ಯ ಭಾಗ. ಅಡುಗೆಯಲ್ಲಿ ಬಳಸುವುದಷ್ಟೇ ಅಲ್ಲದೆ, ಚರ್ಮದ ಆರೈಕೆ ಮತ್ತು ಮನೆಮದ್ದಾಗಿಯೂ ಇದನ್ನು ಅನೇಕರು ಬಳಸುತ್ತಾರೆ.
ರಾತ್ರಿ ಮಲಗುವ ಮುನ್ನ ಪಾದದ ಅಂಗಾಲುಗಳಿಗೆ ತುಪ್ಪ ಹಚ್ಚುವುದು, ಹೊಕ್ಕುಳಿಗೆ ತುಪ್ಪ ಹಾಕುವುದು ಹಾಗೂ ಕಣ್ಣುರೆಪ್ಪೆಗಳಿಗೆ ತುಪ್ಪ ಹಚ್ಚುವುದು ಸಾಂಪ್ರದಾಯಿಕ ಪದ್ಧತಿಗಳಲ್ಲಿ ಸೇರಿವೆ. ಆದರೆ ಈ ಅಭ್ಯಾಸಗಳಿಂದ ನಿಜವಾಗಿಯೂ ಆರೋಗ್ಯ ಪ್ರಯೋಜನಗಳಿವೆಯೇ? ವೈಜ್ಞಾನಿಕವಾಗಿ ಇವುಗಳಿಗೆ ಪುರಾವೆಗಳಿವೆಯೇ? ಇಲ್ಲಿದೆ ಮಾಹಿತಿ.
ಪಾದದ ಅಂಗಾಲುಗಳಿಗೆ ತುಪ್ಪ ಹಚ್ಚುವುದರಿಂದ ಏನು ಪ್ರಯೋಜನ?
ಪಾದಗಳು ಒಣಗಿ ಬಿರುಕು ಬಿಟ್ಟಾಗ ತುಪ್ಪ ಹಚ್ಚುವುದರಿಂದ ಚರ್ಮದ ತೇವಾಂಶ ಕಾಪಾಡಿಕೊಳ್ಳಲು ಸಹಾಯವಾಗಬಹುದು. ತುಪ್ಪ ಚರ್ಮದ ಮೇಲೆ ರಕ್ಷಣಾತ್ಮಕ ಪದರವನ್ನು ರೂಪಿಸಿ ತೇವಾಂಶ ಹೊರಹೋಗುವುದನ್ನು ಕಡಿಮೆ ಮಾಡಬಹುದು. ಅಲ್ಲದೆ, ಪಾದಗಳಿಗೆ ಮೃದುವಾಗಿ ಮಸಾಜ್ ಮಾಡುವುದರಿಂದ ವಿಶ್ರಾಂತಿಯ ಅನುಭವ ಸಿಗಬಹುದು. ಆದರೆ ತುಪ್ಪ ಹಚ್ಚುವುದರಿಂದ ನಿದ್ರೆಯ ಗುಣಮಟ್ಟ ಹೆಚ್ಚುತ್ತದೆ ಅಥವಾ ದೇಹದ ಆಂತರಿಕ ಉಷ್ಣತೆ ನಿಯಂತ್ರಣವಾಗುತ್ತದೆ ಎಂಬುದಕ್ಕೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲ.
ಹೊಕ್ಕುಳಿಗೆ ತುಪ್ಪ ಹಚ್ಚಿದರೆ ಜೀರ್ಣಕ್ರಿಯೆ ಸುಧಾರಿಸುತ್ತಾ?
ಹೊಕ್ಕುಳಿಗೆ ತುಪ್ಪ ಹಚ್ಚುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ, ಮಲಬದ್ಧತೆ ನಿವಾರಣೆಯಾಗುತ್ತದೆ ಹಾಗೂ ಹಾರ್ಮೋನ್ಗಳ ಸಮತೋಲನ ಕಾಪಾಡುತ್ತದೆ ಎಂಬ ನಂಬಿಕೆ ಇದೆ. ಆದರೆ ಈ ಹೇಳಿಕೆಗಳನ್ನು ದೃಢಪಡಿಸುವ ವೈಜ್ಞಾನಿಕ ಪುರಾವೆಗಳು ಲಭ್ಯವಿಲ್ಲ. ಹೊಕ್ಕುಳಿನ ಸುತ್ತಲಿನ ಚರ್ಮ ಒಣಗಿದ್ದರೆ ಸೂಕ್ತವಾದ ಮಾಯಿಶ್ಚರೈಸರ್ ಬಳಸಬಹುದು. ತುಪ್ಪ ಹಚ್ಚುವುದರಿಂದ ದೇಹದ ಆಂತರಿಕ ಅಂಗಗಳ ಕಾರ್ಯನಿರ್ವಹಣೆಯಲ್ಲಿ ಬದಲಾವಣೆಯಾಗುತ್ತದೆ ಎಂದು ಭಾವಿಸಬಾರದು.
ಗಾಯ ಅಥವಾ ಸುಟ್ಟ ಜಾಗಕ್ಕೆ ತುಪ್ಪ ಹಚ್ಚಬೇಡಿ!
ಸಣ್ಣ ಗಾಯಗಳು ಅಥವಾ ಸುಟ್ಟ ಜಾಗಕ್ಕೆ ತುಪ್ಪ ಹಚ್ಚುವ ಅಭ್ಯಾಸ ಕೆಲವರಲ್ಲಿದೆ. ಆದರೆ ಅಡುಗೆಗೆ ಬಳಸುವ ತುಪ್ಪವನ್ನು ಗಾಯದ ಮೇಲೆ ಹಚ್ಚುವುದು ಸೂಕ್ತವಲ್ಲ. ಇದರಿಂದ ಸೋಂಕಿನ ಅಪಾಯ ಹೆಚ್ಚಾಗಬಹುದು. ಸಣ್ಣ ಸುಟ್ಟ ಗಾಯವಾದರೆ ತಕ್ಷಣ ಸುಮಾರು 20 ನಿಮಿಷ ತಂಪಾದ ಹರಿಯುವ ನೀರಿನ ಅಡಿಯಲ್ಲಿ ಇರಿಸಬೇಕು. ಸುಟ್ಟ ಜಾಗಕ್ಕೆ ಐಸ್, ತುಪ್ಪ ಅಥವಾ ಟೂತ್ಪೇಸ್ಟ್ ಹಚ್ಚಬಾರದು. ಆಳವಾದ ಗಾಯ ಅಥವಾ ಗುಳ್ಳೆಗಳು ಕಾಣಿಸಿಕೊಂಡರೆ ವೈದ್ಯಕೀಯ ನೆರವು ಪಡೆಯಬೇಕು.
ಕಣ್ಣುರೆಪ್ಪೆಗಳಿಗೆ ತುಪ್ಪ ಹಚ್ಚುವುದು ಸುರಕ್ಷಿತವೇ?
ಕಣ್ಣುರೆಪ್ಪೆ ಮತ್ತು ರೆಪ್ಪೆಗೂದಲುಗಳಿಗೆ ತುಪ್ಪ ಹಚ್ಚುವುದರಿಂದ ಅವುಗಳ ಬೆಳವಣಿಗೆ ಹೆಚ್ಚುತ್ತದೆ ಅಥವಾ ದೃಷ್ಟಿ ಸುಧಾರಿಸುತ್ತದೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ. ಅಡುಗೆ ತುಪ್ಪವನ್ನು ಕಣ್ಣುಗಳ ಸುತ್ತಲೂ ಬಳಸುವುದರಿಂದ ಕಿರಿಕಿರಿ ಉಂಟಾಗುವ ಸಾಧ್ಯತೆಯಿದೆ. ಕಣ್ಣಿನ ಗ್ರಂಥಿಗಳಲ್ಲಿ ಅಡಚಣೆ ಅಥವಾ ಸೋಂಕಿನ ಅಪಾಯವೂ ಇರಬಹುದು. ಹೀಗಾಗಿ ಕಣ್ಣುಗಳ ಹತ್ತಿರ ತುಪ್ಪ ಹಚ್ಚುವುದನ್ನು ತಪ್ಪಿಸುವುದು ಉತ್ತಮ.
ಆಹಾರದಲ್ಲಿ ತುಪ್ಪ ಎಷ್ಟು ಸೇವಿಸಬಹುದು?
ದೇಸಿ ತುಪ್ಪವನ್ನು ಸಮತೋಲಿತ ಆಹಾರದ ಭಾಗವಾಗಿ ಮಿತ ಪ್ರಮಾಣದಲ್ಲಿ ಸೇವಿಸಬಹುದು. ಆದರೆ ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಹೆಚ್ಚಿರುವುದರಿಂದ ಅತಿಯಾಗಿ ಸೇವಿಸುವುದು ಸೂಕ್ತವಲ್ಲ. ದಿನನಿತ್ಯದ ಆಹಾರದಲ್ಲಿ ಒಟ್ಟಾರೆ ಕೊಬ್ಬಿನ ಪ್ರಮಾಣದ ಬಗ್ಗೆಯೂ ಗಮನಹರಿಸಬೇಕು.
ಒಟ್ಟಿನಲ್ಲಿ, ತುಪ್ಪವನ್ನು ಆಹಾರದಲ್ಲಿ ಮಿತವಾಗಿ ಬಳಸುವುದು ಮತ್ತು ಒಣ ಚರ್ಮಕ್ಕೆ ತೇವಾಂಶ ನೀಡಲು ಬಳಸುವುದು ಕೆಲವರಿಗೆ ಪ್ರಯೋಜನಕಾರಿಯಾಗಬಹುದು. ಆದರೆ ಹೊಕ್ಕುಳಿಗೆ ತುಪ್ಪ ಹಚ್ಚುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಅಥವಾ ಕಣ್ಣುರೆಪ್ಪೆಗಳಿಗೆ ಹಚ್ಚುವುದರಿಂದ ದೃಷ್ಟಿ ಹೆಚ್ಚುತ್ತದೆ ಎಂಬ ನಂಬಿಕೆಗಳಿಗೆ ವೈಜ್ಞಾನಿಕ ಆಧಾರವಿಲ್ಲ. ನೈಸರ್ಗಿಕ ಪದಾರ್ಥವಾದರೂ ಎಲ್ಲ ಸಂದರ್ಭಗಳಲ್ಲಿಯೂ ಸುರಕ್ಷಿತ ಅಥವಾ ಪರಿಣಾಮಕಾರಿ ಎಂದು ಭಾವಿಸಬಾರದು. ಮನೆಮದ್ದುಗಳನ್ನು ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಾಗಿ ಬಳಸಬಾರದು.