ಸಾರ್ವಜನಿಕ ಸಮಾರಂಭಗಳು, ಸಿನಿಮಾ ಕಾರ್ಯಕ್ರಮಗಳು ಹಾಗೂ ಇತರ ನಟರು ಭಾಗವಹಿಸುವ ವೇದಿಕೆಗಳಲ್ಲಿ ‘ಡಿ-ಬಾಸ್’ ಎಂದು ಘೋಷಣೆ ಕೂಗಿ ಗದ್ದಲ ಸೃಷ್ಟಿಸುವ ಕೆಲವು ಅಭಿಮಾನಿಗಳ ವರ್ತನೆಗೆ ನಟ ದರ್ಶನ್ ಅವರ ಅಧಿಕೃತ ಬಳಗ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ವರ್ತನೆಗಳಿಂದ ಇತರರಿಗೆ ಮುಜುಗರ ಉಂಟಾಗುತ್ತಿದ್ದು, ಇನ್ನು ಮುಂದೆ ಬೇರೆ ನಟರ ಕಾರ್ಯಕ್ರಮಗಳಲ್ಲಿ ಅನಗತ್ಯವಾಗಿ ದರ್ಶನ್ ಹೆಸರನ್ನು ಕೂಗಬಾರದು ಎಂದು ‘ಡಿ ಕಂಪನಿ’ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದೆ.
ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಟ ಧ್ರುವ ಸರ್ಜಾ ಹಾಗೂ ಶಾಸಕ ರವಿ ಗಣಿಗ ವೇದಿಕೆಯಲ್ಲಿದ್ದ ಸಂದರ್ಭದಲ್ಲಿ ಕೆಲವರು ‘ಡಿ-ಬಾಸ್, ಡಿ-ಬಾಸ್’ ಎಂದು ಘೋಷಣೆ ಕೂಗಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಘೋಷಣೆಗಳು ಕೇಳಿಬಂದಿದ್ದರಿಂದ ಶಾಸಕ ರವಿ ಗಣಿಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಮಂಡ್ಯದಲ್ಲಿ ಕಳೆದ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ನಟ ಧ್ರುವ ಸರ್ಜಾ ಭಾಗವಹಿಸಿದ್ದರು. ಇದೇ ವೇಳೆ ಕೆಲವರು ನಟ ದರ್ಶನ್ ಹೆಸರಿನಲ್ಲಿ ಘೋಷಣೆ ಕೂಗಲು ಆರಂಭಿಸಿದ್ದರು. ಇದರಿಂದ ಅಸಮಾಧಾನಗೊಂಡ ಶಾಸಕ ರವಿ ಗಣಿಗ, ಅಭಿಮಾನಿಗಳ ಅತಿರೇಕದ ವರ್ತನೆಯ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು.
ಅಭಿಮಾನಿಗಳು ಈ ರೀತಿ ಅತಿಯಾಗಿ ಕಿರುಚಾಡಿ, ಅತಿರೇಕದ ವರ್ತನೆ ತೋರಿದ್ದರಿಂದಲೇ ದರ್ಶನ್ ಇಂದು ಜೈಲು ಸೇರುವಂತಾಗಿದೆ ಎಂದು ರವಿ ಗಣಿಗ ಹೇಳಿಕೆ ನೀಡಿದ್ದರು. ಶಾಸಕರ ಈ ಹೇಳಿಕೆ ಹಾಗೂ ಅಭಿಮಾನಿಗಳ ಘೋಷಣೆಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.

ಇದಕ್ಕೂ ಮೊದಲು ರಾಮನಗರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿಯೂ ಕೆಲವರು ‘ಡಿ-ಬಾಸ್’ ಘೋಷಣೆ ಕೂಗಿದ್ದರು. ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿತ್ತು.
ಅಷ್ಟೇ ಅಲ್ಲದೆ, ಈ ಹಿಂದೆ ವಿವಾಹ ಸಮಾರಂಭವೊಂದಕ್ಕೆ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ದ ಸಂದರ್ಭದಲ್ಲಿಯೂ ಕೆಲ ಅಭಿಮಾನಿಗಳು ‘ಡಿ-ಬಾಸ್’ ಎಂದು ಘೋಷಣೆ ಕೂಗಿದ್ದರು. ಆಗ ವಿಜಯಲಕ್ಷ್ಮಿ ಅವರೇ ಅಭಿಮಾನಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿ, ಇಂತಹ ಘೋಷಣೆಗಳನ್ನು ಕೂಗದಂತೆ ಮನವಿ ಮಾಡಿದ್ದರು.
ಅಭಿಮಾನಿಗಳ ಅತಿರೇಕದ ವರ್ತನೆಯಿಂದ ದರ್ಶನ್ ಅವರಿಗೆ ಮತ್ತಷ್ಟು ತೊಂದರೆಯಾಗಬಹುದು. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಮತ್ತು ಸಂಯಮ ಕಾಪಾಡಿಕೊಳ್ಳಬೇಕು ಎಂದು ವಿಜಯಲಕ್ಷ್ಮಿ ಸಲಹೆ ನೀಡಿದ್ದರು.
ಇದೀಗ ಮಂಡ್ಯದಲ್ಲಿ ನಡೆದ ಘಟನೆಯ ಬೆನ್ನಲ್ಲೇ ದರ್ಶನ್ ಅವರ ಅಧಿಕೃತ ಡಿಜಿಟಲ್ ವೇದಿಕೆಯಾದ ‘ಡಿ ಕಂಪನಿ’ ಅಭಿಮಾನಿಗಳಿಗೆ ಮಹತ್ವದ ಸಂದೇಶ ನೀಡಿದೆ. ಈ ಹಿಂದೆ ವಿಜಯಲಕ್ಷ್ಮಿ ಅವರು ನೀಡಿದ್ದ ಸಲಹೆಯನ್ನು ಪುನರುಚ್ಚರಿಸಿರುವ ಡಿ ಕಂಪನಿ, ಇತರ ನಟರು ಹಾಗೂ ಗಣ್ಯರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ದರ್ಶನ್ ಹೆಸರನ್ನು ಅನಗತ್ಯವಾಗಿ ಕೂಗಿ ಗದ್ದಲ ಸೃಷ್ಟಿಸಬಾರದು ಎಂದು ತಿಳಿಸಿದೆ.
ಸಿನಿಮಾ ಕಾರ್ಯಕ್ರಮಗಳು, ಸಾರ್ವಜನಿಕ ಸಭೆಗಳು, ದೇವಾಲಯಗಳು, ವಿವಾಹ ಸಮಾರಂಭಗಳು ಹಾಗೂ ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಅಭಿಮಾನಿಗಳು ಶಿಸ್ತು ಕಾಪಾಡಿಕೊಳ್ಳಬೇಕು. ತಮ್ಮ ನೆಚ್ಚಿನ ನಟನ ಮೇಲಿರುವ ಪ್ರೀತಿ ಮತ್ತು ಅಭಿಮಾನವನ್ನು ಇತರರಿಗೆ ತೊಂದರೆಯಾಗದ ರೀತಿಯಲ್ಲಿ ವ್ಯಕ್ತಪಡಿಸಬೇಕು ಎಂದು ಮನವಿ ಮಾಡಲಾಗಿದೆ.
ದರ್ಶನ್ ಪ್ರಸ್ತುತ ಎದುರಿಸುತ್ತಿರುವ ಕಾನೂನು ಪರಿಸ್ಥಿತಿಯನ್ನು ಅಭಿಮಾನಿಗಳು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು. ಇಂತಹ ಸಂದರ್ಭದಲ್ಲಿ ಅನಗತ್ಯ ಘೋಷಣೆಗಳು ಹಾಗೂ ವಿವಾದಗಳಿಗೆ ಕಾರಣವಾಗುವ ವರ್ತನೆಗಳನ್ನು ತಪ್ಪಿಸಬೇಕು ಎಂಬ ಸಂದೇಶವನ್ನು ಡಿ ಕಂಪನಿ ನೀಡಿದೆ.
ನಟರ ಮೇಲಿನ ಅಭಿಮಾನ ವ್ಯಕ್ತಪಡಿಸುವುದು ತಪ್ಪಲ್ಲ. ಆದರೆ ಬೇರೆ ನಟರ ಕಾರ್ಯಕ್ರಮಗಳಲ್ಲಿ ಅಪ್ರಸ್ತುತವಾಗಿ ಘೋಷಣೆ ಕೂಗುವುದು, ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದು ಹಾಗೂ ವೇದಿಕೆಯಲ್ಲಿರುವ ಗಣ್ಯರಿಗೆ ಮುಜುಗರ ಉಂಟುಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.