ಅಕ್ಷರ ಗಾತ್ರ

ಸೋನಿಯಾ ಗಾಂಧಿ ಟಾರ್ಗೆಟ್ ಮಾಡಿ ಪೋಸ್ಟ್ ಮಾಡಿದ್ರಾ ಕಂಗನಾ? ಬಿಜೆಪಿ ಸಂಸದೆ ವಿರುದ್ಧ FIR ದಾಖಲು

Sonia Gandhi ವಿರುದ್ಧ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡ ಆರೋಪ ಹೊತ್ತಿರುವ Kangana Ranaut.

ಶಿಮ್ಲಾ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡಿರುವ ಆರೋಪ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಈ ಸಂಬಂಧ ಹಿಮಾಚಲ ಪ್ರದೇಶ ಪೊಲೀಸರು ಕಂಗನಾ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ನಿವೃತ್ತ ಕ್ಯಾಪ್ಟನ್ ಅತುಲ್ ಶರ್ಮಾ ನೀಡಿದ ದೂರಿನ ಬಳಿಕ ಪ್ರಕರಣ ದಾಖಲಾಗಿದೆ.

ನವೆಂಬರ್ 10ರಂದು ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಇದೀಗ ವಿವಾದದ ಕೇಂದ್ರವಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಸಂಜಯ್ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸಾವಿನ ಘಟನೆಗಳನ್ನು ಉಲ್ಲೇಖಿಸಿ ಸೋನಿಯಾ ಗಾಂಧಿ ವಿರುದ್ಧ ಪರೋಕ್ಷ ಆರೋಪಗಳನ್ನು ಮಾಡಿರುವುದು ದೂರಿಗೆ ಪ್ರಮುಖ ಕಾರಣ ಎನ್ನಲಾಗಿದೆ.

ಗಾಂಧಿ ಕುಟುಂಬದ ಸಾವಿನ ಬಗ್ಗೆ ಕಂಗನಾ ಪೋಸ್ಟ್‌ನಲ್ಲಿ ಏನಿತ್ತು?

ಕಂಗನಾ ತಮ್ಮ ಪೋಸ್ಟ್‌ನಲ್ಲಿ ‘ಎಮರ್ಜೆನ್ಸಿ’ ಸಿನಿಮಾ ಮಾಡುವ ಸಂದರ್ಭದಲ್ಲಿ ಭಾರತೀಯ ರಾಜಕೀಯ ಹಾಗೂ ಗಾಂಧಿ ಕುಟುಂಬದ ಕುರಿತು ಸಾಕಷ್ಟು ಸಂಶೋಧನೆ ನಡೆಸಿದ್ದಾಗಿ ಹೇಳಿಕೊಂಡಿದ್ದರು. ಬಳಿಕ ಸೋನಿಯಾ ಗಾಂಧಿ ಅವರನ್ನು ನಿಗೂಢ ವಿದೇಶಿ ಪ್ರಜೆ ಎಂದು ಉಲ್ಲೇಖಿಸಿ, ಅವರು ಗಾಂಧಿ ಕುಟುಂಬಕ್ಕೆ ಪ್ರವೇಶಿಸಿದ ನಂತರ ಇಂದಿರಾ ಗಾಂಧಿ ಹತ್ಯೆ, ಸಂಜಯ್ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸಾವು ಸಂಭವಿಸಿರುವುದನ್ನು ಪ್ರಸ್ತಾಪಿಸಿದ್ದರು.

ಈ ಘಟನೆಗಳ ಬಳಿಕ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದ್ದವರು ಉಳಿಯಲಿಲ್ಲ. ಕೊನೆಗೆ ಅನುಕಂಪದ ಆಧಾರದ ಮೇಲೆ ಅಧಿಕಾರದ ಕೇಂದ್ರಕ್ಕೆ ಬಂದವರು ಸೋನಿಯಾ ಗಾಂಧಿ ಎಂಬ ಅರ್ಥ ಬರುವಂತೆ ಪೋಸ್ಟ್‌ನಲ್ಲಿ ಬರೆದಿದ್ದರು.

ಇಷ್ಟೇ ಅಲ್ಲದೆ, ವಿದೇಶಿ ಅಜೆಂಡಾಗಳನ್ನು ಪ್ರಚಾರ ಮಾಡುವುದು ಹಾಗೂ ಭಯೋತ್ಪಾದಕರ ಪರವಾಗಿ ಅನುಕಂಪ ತೋರಿಸುವುದು ಸೇರಿದಂತೆ ಸೋನಿಯಾ ಗಾಂಧಿ ವಿರುದ್ಧ ಹಲವು ಟೀಕೆಗಳನ್ನು ಮಾಡಿದ್ದರು. ಈ ಹೇಳಿಕೆಗಳು ಗಾಂಧಿ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡುವಂತಿವೆ ಎಂದು ದೂರುದಾರರು ಆಕ್ಷೇಪಿಸಿದ್ದಾರೆ.

ಡಿಜಿಪಿಗೆ ದೂರು ನೀಡಿದ ನಿವೃತ್ತ ಕ್ಯಾಪ್ಟನ್:

ನವೆಂಬರ್ 12ರಂದು ಸಂಜೆ ನಿವೃತ್ತ ಕ್ಯಾಪ್ಟನ್ ಅತುಲ್ ಶರ್ಮಾ ಅವರು ಡಿಜಿಪಿಗೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದರು. ಇಂತಹ ಪೋಸ್ಟ್‌ಗಳು ಸಾರ್ವಜನಿಕರಲ್ಲಿ ದ್ವೇಷ ಹಾಗೂ ಅಶಾಂತಿಗೆ ಕಾರಣವಾಗಬಹುದು ಎಂದು ಅವರು ದೂರಿನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಕಂಗನಾ ಹಂಚಿಕೊಂಡ ಪೋಸ್ಟ್ ಕುರಿತು ಸೈಬರ್ ವಿಧಿವಿಜ್ಞಾನ ಪರೀಕ್ಷೆ ನಡೆಸುವಂತೆಯೂ ಮನವಿ ಮಾಡಿದ್ದಾರೆ.

ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿರುವುದನ್ನು ಶಿಮ್ಲಾ ಎಸ್‌ಪಿ ಗೌರವ್ ಸಿಂಗ್ ಖಚಿತಪಡಿಸಿದ್ದು, ತನಿಖೆ ಮುಂದುವರಿದಿದೆ.

ಆತ್ಮಚರಿತ್ರೆ ಬಿಡುಗಡೆ ದಿನವೇ ವಿವಾದಾತ್ಮಕ ಪೋಸ್ಟ್!

ಈ ಪ್ರಕರಣದಲ್ಲಿ ಮತ್ತೊಂದು ಕುತೂಹಲಕಾರಿ ಸಂಗತಿಯೂ ಇದೆ. ಸೋನಿಯಾ ಗಾಂಧಿ ಅವರ ‘Belonging: A Journey of Love’ ಎಂಬ ಆತ್ಮಚರಿತ್ರೆ ಬಿಡುಗಡೆಯಾದ ದಿನವೇ ಕಂಗನಾ ತಮ್ಮ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡಿದ್ದರು. ಈ ಬೆಳವಣಿಗೆಯು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವರದಿಗಾರರು (National & International Reporter)

NTV ಕನ್ನಡ ಸಂಪಾದಕೀಯ ತಂಡ.