ನವದೆಹಲಿ: ಬಿಸ್ಲೆರಿ ನೀರು ಕುಡಿಯಲು ಸುರಕ್ಷಿತವೇ ಎಂಬ ಚರ್ಚೆ ನಡುವೆಯೇ ಕಂಪನಿ ಮಹತ್ವದ ಸ್ಪಷ್ಟನೆ ನೀಡಿದೆ.
ನಮ್ಮ ನೀರಿನ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ, ಉತ್ಪನ್ನಗಳು ಬಳಕೆಗೆ ಸಂಪೂರ್ಣ ಸುರಕ್ಷಿತವಾಗಿವೆ ಎಂದು ಬಿಸ್ಲೆರಿ ಹೇಳಿದೆ.
ಬಿಸ್ಲೆರಿ ನೀರಿನ ಮಾದರಿಯಲ್ಲಿ ನಿಗದಿತ ಗುಣಮಟ್ಟದ ಮಾನದಂಡ ಉಲ್ಲಂಘನೆಯಾಗಿದೆ ಎಂಬ ಆರೋಪದ ಮೇಲೆ ಎಫ್‌ಎಸ್‌ಎಸ್‌ಎಐ ಕಾನೂನು ಕ್ರಮಕ್ಕೆ ಅನುಮತಿ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಕಂಪನಿ, ತನ್ನ ಉತ್ಪನ್ನಗಳ ಗುಣಮಟ್ಟವನ್ನು ಸಮರ್ಥಿಸಿಕೊಂಡಿದೆ.
ಸ್ವತಂತ್ರ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಲ್ಲಿ ನೀರಿನಲ್ಲಿರುವ ಬ್ರೋಮೇಟ್ ಪ್ರಮಾಣ ನಿಗದಿತ ಮಿತಿಯಲ್ಲೇ ಇದೆ. ಕಂಪನಿಯಲ್ಲಿ ಗುಣಮಟ್ಟ ಪರಿಶೀಲನೆಗೆ ಕಟ್ಟುನಿಟ್ಟಿನ ವ್ಯವಸ್ಥೆ ಜಾರಿಯಲ್ಲಿದೆ. ಗ್ರಾಹಕರಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವುದೇ ನಮ್ಮ ಆದ್ಯತೆ ಎಂದು ಬಿಸ್ಲೆರಿ ತಿಳಿಸಿದೆ. ಅಲ್ಲದೆ, ಎಫ್‌ಎಸ್‌ಎಸ್‌ಎಐ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿಯೂ ಹೇಳಿದೆ.

ಗೋವಾ ಘಟಕದ ನೀರಿನ ಬ್ಯಾಚ್‌ನಲ್ಲಿ ಏನಿತ್ತು ವಿವಾದ?
2025ರ ಸೆಪ್ಟೆಂಬರ್‌ನಲ್ಲಿ ಗೋವಾದಲ್ಲಿರುವ ಬಿಸ್ಲೆರಿ ಘಟಕದಲ್ಲಿ ತಯಾರಾದ ನೀರಿನ ಬ್ಯಾಚ್‌ಗೆ ಸಂಬಂಧಿಸಿದಂತೆ ಈ ವಿವಾದ ಆರಂಭವಾಗಿತ್ತು. ಕುಡಿಯುವ ನೀರಿನಲ್ಲಿ ಪ್ರತಿ ಲೀಟರ್‌ಗೆ ಗರಿಷ್ಠ 10 ಮೈಕ್ರೋಗ್ರಾಂ ಬ್ರೋಮೇಟ್ ಇರಲು ಅನುಮತಿ ಇದೆ. ಆದರೆ ಆರಂಭಿಕ ಪರೀಕ್ಷೆಯಲ್ಲಿ 12 ಮೈಕ್ರೋಗ್ರಾಂ ಪ್ರಮಾಣ ದಾಖಲಾಗಿತ್ತು ಎನ್ನಲಾಗಿದೆ.
ಇದೀಗ ಈ ವರದಿಗೆ ಪ್ರತಿಯಾಗಿ ಸ್ವತಂತ್ರ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿರುವ ಕಂಪನಿ, ಅದರ ವರದಿಯನ್ನು ಎಫ್‌ಎಸ್‌ಎಸ್‌ಎಐಗೆ ಸಲ್ಲಿಸಿರುವುದಾಗಿ ತಿಳಿಸಿದೆ. ಹೀಗಾಗಿ ಬಿಸ್ಲೆರಿ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದ ವಿವಾದದಲ್ಲಿ ಮುಂದಿನ ತನಿಖೆ ಹಾಗೂ ಪ್ರಾಧಿಕಾರದ ಪರಿಶೀಲನೆ ಮಹತ್ವ ಪಡೆದುಕೊಂಡಿದೆ.