ಬೆಂಗಳೂರು: ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೂತನ ಅಧಿಕೃತ ನಿವಾಸವಾಗಿ ಸಿದ್ಧಗೊಂಡಿರುವ ಕುಮಾರಕೃಪಾ ಅತಿಥಿಗೃಹಕ್ಕೆ ‘ಗಂಗಾ’ ಎಂದು ಮರುನಾಮಕರಣ ಮಾಡಲಾಗಿದೆ. ನವೆಂಬರ್ 16ರ ಮೊದಲ ಕಾರ್ತಿಕ ಸೋಮವಾರದ ಶುಭ ಸಂದರ್ಭದಲ್ಲಿ ನಿವಾಸದಲ್ಲಿ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ. ಇನ್ನು ಮುಂದೆ ಡಿಕೆ ಶಿವಕುಮಾರ್ ಅವರು ಕುಟುಂಬ ಸಮೇತರಾಗಿ ಇದೇ ನಿವಾಸದಲ್ಲಿ ವಾಸಿಸಲಿದ್ದಾರೆ.
ನಿವಾಸಕ್ಕೆ ‘ಗಂಗಾ’ ಎಂದು ಹೆಸರಿಟ್ಟು ನಾಮಫಲಕವನ್ನೂ ಅಳವಡಿಸಲಾಗಿದೆ. ಈ ನಡುವೆ ಮನೆ ನವೀಕರಣಕ್ಕೆ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನವೀಕರಣಕ್ಕೆ ಕಡಿಮೆ ವೆಚ್ಚ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮನೆ ನವೀಕರಣಕ್ಕೆ ಎಷ್ಟು ಖರ್ಚು? ಡಿಕೆಶಿ ಹೇಳಿದ್ದೇನು?
ಖಾಸಗಿ ಮನೆಯನ್ನು ಬಿಟ್ಟು ಸರ್ಕಾರಿ ನಿವಾಸವಾದ ಕುಮಾರಕೃಪಾವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ನಿವಾಸದ ಮೂಲ ಹೆರಿಟೇಜ್ ಸ್ವರೂಪವನ್ನು ಉಳಿಸಿಕೊಂಡು ಶೇ.10ರಷ್ಟು ಮಾತ್ರ ನವೀಕರಣ ಮಾಡಲಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಮನೆ ನವೀಕರಣಕ್ಕೆ ಎಷ್ಟು ವೆಚ್ಚವಾಗಿದೆ ಎಂಬುದು ತಮಗೆ ನಿಖರವಾಗಿ ತಿಳಿದಿಲ್ಲ ಎಂದ ಅವರು, ಭದ್ರತೆಗಾಗಿ ಸ್ವಲ್ಪ ಹಣ ಖರ್ಚಾಗಿರಬಹುದು ಎಂದು ಹೇಳಿದ್ದಾರೆ. ನಿವಾಸದ ನವೀಕರಣಕ್ಕೆ ಕಡಿಮೆ ವೆಚ್ಚದ ಕಲ್ಲುಗಳನ್ನು ಬಳಸಲಾಗಿದೆ. ತಮ್ಮ ಸ್ವಂತ ಮನೆಯಲ್ಲಿದ್ದ ಪೀಠೋಪಕರಣಗಳನ್ನೇ ಇಲ್ಲಿಯೂ ಬಳಸಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಗುರುವಾರದಿಂದ ‘ಗಂಗಾ’ ನಿವಾಸದಲ್ಲೇ ಭೇಟಿಗೆ ಅವಕಾಶ
ಗುರುವಾರ 224 ಶಾಸಕರು, ಸಚಿವರು ಹಾಗೂ ಸಂಸದರನ್ನು ನೂತನ ನಿವಾಸಕ್ಕೆ ಆಹ್ವಾನಿಸಿರುವುದಾಗಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಅಂದಿನಿಂದಲೇ ‘ಗಂಗಾ’ ನಿವಾಸದಲ್ಲಿ ಭೇಟಿಯ ಕಾರ್ಯಕ್ರಮ ಆರಂಭವಾಗಲಿದೆ.
ಸಾರ್ವಜನಿಕರನ್ನು ಭೇಟಿ ಮಾಡಲು ಈಗಾಗಲೇ ‘ಕೃಷ್ಣಾ’ ಗೃಹ ಕಚೇರಿ ಇದೆ. ಶಾಸಕರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಲು ಗಂಗಾ ನಿವಾಸದಲ್ಲಿಯೂ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.
‘ನಾವ್ಯಾರೂ ಶಾಶ್ವತವಾಗಿ ಇರುವುದಿಲ್ಲ. ಆದರೆ ಮುಖ್ಯಮಂತ್ರಿ ಆಗಿರುವುದಕ್ಕೆ ಅಧಿಕೃತ ನಿವಾಸ ಬೇಕಲ್ಲವೇ?’ ಎಂದು ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.