ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕರ್ನಾಟಕ ಪೊಲೀಸರ ಕಾರ್ಯವನ್ನು ಗುರುತಿಸಿ ಕೇಂದ್ರ ಸರ್ಕಾರವೇ ಪ್ರಶಸ್ತಿ ನೀಡಿದೆ. ಅದೇ ರೀತಿ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಗೂ ಪ್ರಶಸ್ತಿ ಸಿಗಲಿದೆ ಎಂದು ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ವಿಚಾರವಾಗಿ ಪೊಲೀಸರ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಕರ್ನಾಟಕ ಪೊಲೀಸರ ಉತ್ತಮ ಕಾರ್ಯವನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ. ಸ್ಟಿಂಗ್ ಆಪರೇಷನ್ ಪ್ರಕರಣದಲ್ಲೂ ಪೊಲೀಸರ ತನಿಖೆಗೆ ಪ್ರಶಸ್ತಿ ಸಿಗಲಿದೆ. ಆದರೆ, ಕೆಟ್ಟ ಕೆಲಸಗಳಿಗೆ ಪುರಸ್ಕಾರ ಸಿಗುವುದಿಲ್ಲ. ನಿಮಗೆ ಅಂಟಿರುವ ಕಳಂಕವೂ ಹೋಗುವುದಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹರಡುತ್ತಿರುವ ಬಗ್ಗೆ ಪೊಲೀಸರು ಮಾಹಿತಿ ನೀಡುವುದು ತಪ್ಪೇ? ಪೊಲೀಸರು ಯಾವ ಕಾನೂನನ್ನು ಉಲ್ಲಂಘಿಸಿದ್ದಾರೆ? ಯಾವ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ ಎಂಬುದನ್ನು ತಿಳಿಸಲಿ. ಪೊಲೀಸರಿಗೆ ಲಾಠಿ ಕೊಟ್ಟಿರುವುದು ಕೋಲಾಟವಾಡುವುದಕ್ಕಾ ಎಂದು ಪ್ರಶ್ನಿಸಿದರು.

ಗೃಹ ಸಚಿವನಾಗಿರುವ ನನಗೆ ಸಂವಿಧಾನದ ಅಡಿಯಲ್ಲಿ ವಿಶೇಷ ಅಧಿಕಾರಗಳಿಲ್ಲ. ಕಾನೂನಿನಲ್ಲಿ ಏನು ನಿಯಮಗಳಿವೆಯೋ ಅದರ ಪ್ರಕಾರವೇ ಕೆಲಸ ಮಾಡಬೇಕು. ತನಿಖೆಯಲ್ಲಿ ಎಷ್ಟೇ ಸಣ್ಣ ಸಾಕ್ಷಿ ಸಿಕ್ಕರೂ ಪರಿಶೀಲಿಸುತ್ತೇವೆ. ಸಾಮಾನ್ಯ ಕಾರ್ಯಕರ್ತರಾಗಿರಲಿ, ಸಂಸದರಾಗಿರಲಿ ಅಥವಾ ಸಚಿವರಾಗಿರಲಿ, ನೋಟಿಸ್ ನೀಡಿ ವಿಚಾರಣೆಗೆ ಕರೆಯುವ ಅಗತ್ಯವಿದ್ದರೆ ಕರೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ರಿತೇಶ್ ಪಾಂಡೆಗೆ ಮೊಬೈಲ್ ಕಳುಹಿಸಿದ್ದು ಯಾರು? ಆ ಮೊಬೈಲ್ ಎಲ್ಲಿಗೆ ಹೋಗಿತ್ತು? ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ರಿತೇಶ್ ಪಾಂಡೆಯನ್ನು ಗಾಜಿಯಾಬಾದ್‌ನಲ್ಲೇ ವಶಕ್ಕೆ ಪಡೆಯಲಾಗಿದೆ. ಕೇಂದ್ರ ಸಚಿವರ ಮನೆಯಲ್ಲಿ ವಶಕ್ಕೆ ಪಡೆದಿದ್ದೇವೆ ಎಂದು ನಾವು ಎಲ್ಲಿಯೂ ಹೇಳಿಲ್ಲ ಎಂದರು.