ಬೆಂಗಳೂರು: ಒಂದು ಕಡೆ ಮೈಕೊರೆಯುವ ಚಳಿ, ಮತ್ತೊಂದೆಡೆ ಪುಟಾಣಿ ಮಕ್ಕಳನ್ನು ಕಟ್ಟಿಕೊಂಡು ಬೀದಿಯಲ್ಲೇ ಧರಣಿ. ತಮ್ಮ ಬೇಡಿಕೆ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆರಂಭವಾಗಿರುವ ಅಹೋರಾತ್ರಿ ಪ್ರತಿಭಟನೆ ಇದೀಗ ಮೂರನೇ ದಿನಕ್ಕೆ ಕಾಲಿಟ್ಟಿದೆ. ಇತ್ತ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯತ್ತ ಸಾವಿರಾರು ಆಶಾ ಕಾರ್ಯಕರ್ತೆಯರ ಕಣ್ಣು ನೆಟ್ಟಿದೆ.
ಮಾಸಿಕ 15 ಸಾವಿರ ರೂ. ನಿಶ್ಚಿತ ಗೌರವಧನ, ನಿವೃತ್ತಿ ಸಂದರ್ಭದಲ್ಲಿ 5 ಲಕ್ಷ ರೂ. ಇಡಿಗಂಟು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂಬುದು ಆಶಾ ಕಾರ್ಯಕರ್ತೆಯರ ಆಗ್ರಹ. ರಾಜ್ಯದ ಮೂಲೆ ಮೂಲೆಗಳಿಂದ ಕಾರ್ಯಕರ್ತೆಯರು ಬೆಂಗಳೂರಿಗೆ ಆಗಮಿಸುತ್ತಿದ್ದು, ಫ್ರೀಡಂ ಪಾರ್ಕ್ ಪ್ರತಿಭಟನಾಕಾರರಿಂದ ತುಂಬಿಹೋಗಿದೆ. ಜಾಗ ಸಾಲದ ಕಾರಣ ಕಾಳಿದಾಸ ರಸ್ತೆ ಹಾಗೂ ಶೇಷಾದ್ರಿ ರಸ್ತೆಗಳಲ್ಲೂ ಕುಳಿತು ಧರಣಿ ನಡೆಸುತ್ತಿದ್ದಾರೆ.
ಹಗಲು ಮಾತ್ರವಲ್ಲ, ರಾತ್ರಿಯೂ ಹೋರಾಟ ಮುಂದುವರಿದಿದೆ. ಕೊರೆವ ಚಳಿಯಲ್ಲಿ ಕಂಬಳಿ ಹೊದ್ದು, ಪುಟಾಣಿ ಮಕ್ಕಳನ್ನು ಜೊತೆಯಲ್ಲೇ ಇಟ್ಟುಕೊಂಡು ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದಿಂದ ಲಿಖಿತ ಭರವಸೆ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂಬುದು ಅವರ ಸ್ಪಷ್ಟ ನಿಲುವು.

ಇಂದು ಸಿಗುತ್ತಾ 15 ಸಾವಿರ ರೂ. ಗೌರವಧನದ ಭರವಸೆ?
ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಸಚಿವ ಸಂಪುಟ ಸಭೆ ಆಶಾ ಕಾರ್ಯಕರ್ತೆಯರ ಪಾಲಿಗೆ ನಿರ್ಣಾಯಕವಾಗುವ ನಿರೀಕ್ಷೆಯಿದೆ. ಮಾಸಿಕ 15 ಸಾವಿರ ರೂ. ಗೌರವಧನ ನಿಗದಿಪಡಿಸುವ ಕುರಿತು ಸಂಪುಟ ಸಭೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ನಿರ್ದೇಶಕಿ ರಜನಿ ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಂದಿನ ಸಭೆಯಲ್ಲಿ ಸರ್ಕಾರ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಇನ್ನು ಮಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್, ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಕೇಂದ್ರ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಪಟ್ಟಿ ದೊಡ್ಡದಿದೆ!
15 ಸಾವಿರ ರೂ. ಮಾಸಿಕ ಗೌರವಧನದ ಜೊತೆಗೆ ಸಮಸ್ತ ಆ್ಯಪ್ ಮೂಲಕದ ಒತ್ತಾಯದ ಮೊಬೈಲ್ ಕೆಲಸ ಕೈಬಿಡಬೇಕು, ನಿವೃತ್ತರಾದವರಿಗೆ ಬಾಕಿ ಇಡಿಗಂಟು ಬಿಡುಗಡೆ ಮಾಡಬೇಕು, ಆಶಾ ನಿಧಿಯ ಬಾಕಿ ಪ್ರೋತ್ಸಾಹಧನ ಪಾವತಿಸಬೇಕು ಎಂಬ ಬೇಡಿಕೆಗಳಿವೆ.
ಅಲ್ಲದೆ ಸುಗಮಕಾರರ ಮರುನೇಮಕ, ಬಾಕಿ ವೇತನ ಪಾವತಿ, ಎನ್‌ಐಒಎಸ್ ತರಬೇತಿ ಪ್ರೋತ್ಸಾಹಧನ, ತೀವ್ರ ಕಾಯಿಲೆ ಚಿಕಿತ್ಸಾ ಅವಧಿಯಲ್ಲಿ ಮೂರು ತಿಂಗಳ ಗೌರವಧನ ಹಾಗೂ ಸೇವಾ ನಿವೃತ್ತಿ ಇಡಿಗಂಟನ್ನು ಬಂಗಾಳ ಮಾದರಿಯಲ್ಲಿ 5 ಲಕ್ಷ ರೂ.ಗೆ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಆಶಾ ಕಾರ್ಯಕರ್ತೆಯರ ಮೂರು ದಿನಗಳ ಹೋರಾಟಕ್ಕೆ ಇಂದು ಸರ್ಕಾರದಿಂದ ಸ್ಪಂದನೆ ಸಿಗುತ್ತಾ? 15 ಸಾವಿರ ರೂ. ಗೌರವಧನದ ಬೇಡಿಕೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಗುತ್ತಾ? ಅಥವಾ ಫ್ರೀಡಂ ಪಾರ್ಕ್‌ನ ಹೋರಾಟ ಮತ್ತಷ್ಟು ದಿನ ಮುಂದುವರಿಯುತ್ತಾ? ಎಂಬುದನ್ನು ಕಾದುನೋಡಬೇಕಿದೆ.