ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಅನಿರುದ್ಧ್ ರವಿಚಂದರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡದ ಫ್ರಾಂಚೈಸಿ ಸಿಇಒ ಕಾವ್ಯಾ ಮಾರನ್ ಅವರ ವಿವಾಹದ ಬಗ್ಗೆ ಇದೀಗ ಭಾರೀ ಚರ್ಚೆ ಶುರುವಾಗಿದೆ.
ನವೆಂಬರ್ 10 ಮತ್ತು 11ರಂದು ಗ್ರೀಸ್‌ನಲ್ಲಿ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆಯಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈ ಸಮಾರಂಭಕ್ಕೆ ಸೂಪರ್‌ಸ್ಟಾರ್ ರಜನಿಕಾಂತ್ ಸೇರಿದಂತೆ ಚಿತ್ರರಂಗ, ರಾಜಕೀಯ ಹಾಗೂ ಉದ್ಯಮ ಕ್ಷೇತ್ರದ ಗಣ್ಯರು ಭಾಗಿಯಾಗುವ ನಿರೀಕ್ಷೆಯಿದೆ.
ಮದುವೆಗೆ ಗ್ರೀಸ್‌ಗೆ ಹೊರಟ ರಜನಿಕಾಂತ್!
ಅನಿರುದ್ಧ್ ಅವರ ಕುಟುಂಬದ ಆಪ್ತ ಸಂಬಂಧಿಯಾಗಿರುವ ನಟ ರಜನಿಕಾಂತ್ ಅವರು ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಗ್ರೀಸ್‌ಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ. ಚೆನ್ನೈ ವಿಮಾನ ನಿಲ್ದಾಣದಿಂದ ರಜನಿಕಾಂತ್ ಪ್ರಯಾಣಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಮಾನದೊಳಗೆ ಸಿಬ್ಬಂದಿಯೊಂದಿಗೆ ಫೋಟೋಗೆ ಪೋಸ್ ನೀಡಿರುವ ಚಿತ್ರವೂ ಅಭಿಮಾನಿಗಳ ಗಮನ ಸೆಳೆದಿದೆ.

ಸ್ಟಾಲಿನ್, ಉದಯನಿಧಿ ಸ್ಟಾಲಿನ್ ಕೂಡ ಭಾಗಿ?
ಇತ್ತ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ಅವರ ಪುತ್ರ ಉದಯನಿಧಿ ಸ್ಟಾಲಿನ್ ಕೂಡ ವಿವಾಹ ಸಮಾರಂಭದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಸೋಮವಾರ ಮುಂಜಾನೆ 3.50ಕ್ಕೆ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿಂದ ಗ್ರೀಸ್‌ಗೆ ತೆರಳಲಿದ್ದಾರೆ ಎನ್ನಲಾಗಿದೆ.
ನವೆಂಬರ್ 11ರಂದು ಅದ್ಧೂರಿ ವಿವಾಹ?
ಆಪ್ತ ಮೂಲಗಳ ಮಾಹಿತಿ ಪ್ರಕಾರ, ನವೆಂಬರ್ 11ರಂದು ವಿವಾಹ ಸಮಾರಂಭ ನಡೆಯುವ ಸಾಧ್ಯತೆಯಿದೆ. ಚಿತ್ರರಂಗದ ಹಲವು ಪ್ರಮುಖ ನಟರು, ಉದ್ಯಮಿಗಳು ಹಾಗೂ ರಾಜಕೀಯ ನಾಯಕರು ಈ ಅದ್ಧೂರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಆದರೆ, ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಅವರ ವಿವಾಹದ ಕುರಿತು ಇದುವರೆಗೆ ಅಧಿಕೃತವಾಗಿ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲ. ಹೀಗಾಗಿ ಮದುವೆಯ ದಿನಾಂಕ ಹಾಗೂ ಸಮಾರಂಭದ ವಿವರಗಳ ಬಗ್ಗೆ ಹರಿದಾಡುತ್ತಿರುವ ಮಾಹಿತಿಗಳು ಸದ್ಯಕ್ಕೆ ಮಾಧ್ಯಮ ವರದಿಗಳು ಮತ್ತು ಮೂಲಗಳ ಹೇಳಿಕೆಗಳಿಗೆ ಸೀಮಿತವಾಗಿವೆ.