ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರಿಗೆ ಮತ್ತೆ ಬೆನ್ನು ನೋವಿನ ಸಮಸ್ಯೆ ಎದುರಾಗಿದೆ.
ಚಿಕಿತ್ಸೆಗಾಗಿ ನ್ಯಾಯಾಲಯದ ಮೊರೆ ಹೋಗಿದ್ದ ದರ್ಶನ್‌ಗೆ ಇದೀಗ ಅನುಮತಿ ಸಿಕ್ಕಿದೆ. ಆದರೆ ಈ ಬಾರಿ ಜೈಲಿನಿಂದ ಹೊರಗೆ ಹೋಗುವ ಅವಕಾಶ ಮಾತ್ರ ಸಿಕ್ಕಿಲ್ಲ. ಜೈಲಿನಲ್ಲಿಯೇ ಫಿಸಿಯೋಥೆರಪಿ ಚಿಕಿತ್ಸೆ ಪಡೆಯುವಂತೆ ನ್ಯಾಯಾಲಯ ಆದೇಶಿಸಿದೆ.
ಬೆನ್ನು ನೋವು ಮರುಕಳಿಸಿರುವ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕಳೆದ 15 ತಿಂಗಳಿನಿಂದ ಜೈಲಿನಲ್ಲಿ ನೆಲದ ಮೇಲೆ ಮಲಗುತ್ತಿರುವುದರಿಂದ ಹಾಗೂ ಚಳಿಗಾಲದ ಪರಿಣಾಮದಿಂದ ಬೆನ್ನು ನೋವು ಹೆಚ್ಚಾಗಿದೆ. ಹೀಗಾಗಿ ಸೂಕ್ತ ಚಿಕಿತ್ಸೆ ಅಗತ್ಯವಿದೆ ಎಂದು ವಕೀಲ ಹಷ್ಮತ್ ಪಾಷಾ ವಾದಿಸಿದ್ದರು.
ಈ ಅರ್ಜಿಯ ವಿಚಾರಣೆ ಕಳೆದ ಮೂರು ದಿನಗಳಿಂದ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಡೆದಿತ್ತು. ಇಂದು ಆದೇಶ ಹೊರಡಿಸಿರುವ ನ್ಯಾಯಾಲಯ, ದರ್ಶನ್‌ಗೆ ಜೈಲಿನಲ್ಲಿಯೇ ಫಿಸಿಯೋಥೆರಪಿ ಸೇರಿದಂತೆ ಅಗತ್ಯ ಚಿಕಿತ್ಸೆ ಪಡೆಯಲು ಅವಕಾಶ ನೀಡಿದೆ. ಇದಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸುವಂತೆ ಜೈಲಾಧಿಕಾರಿಗಳಿಗೆ ಸೂಚಿಸಿದೆ.

ಅಂದಹಾಗೆ, ದರ್ಶನ್‌ಗೆ ಬೆನ್ನು ನೋವಿನ ಸಮಸ್ಯೆ ಹೊಸದೇನಲ್ಲ. 2024ರಲ್ಲಿ ಬಂಧನವಾದ ಕೆಲ ತಿಂಗಳ ಬಳಿಕವೂ ಇದೇ ಸಮಸ್ಯೆ ಮುಂದಿಟ್ಟುಕೊಂಡು ಚಿಕಿತ್ಸೆಗಾಗಿ ಮನವಿ ಮಾಡಿದ್ದರು. ಆಗ ವೈದ್ಯಕೀಯ ವರದಿಯಲ್ಲಿ ಎಲ್4 ಮತ್ತು ಎಲ್5 ಭಾಗದಲ್ಲಿ ಸಮಸ್ಯೆ ಇರುವುದು ಪತ್ತೆಯಾಗಿತ್ತು. ಸೂಕ್ತ ಚಿಕಿತ್ಸೆ ಸಿಗದಿದ್ದರೆ ಕಾಲು ಬಲಹೀನಗೊಳ್ಳುವ ಸಾಧ್ಯತೆಯಿದೆ ಎಂಬ ವೈದ್ಯಕೀಯ ಅಭಿಪ್ರಾಯವೂ ವ್ಯಕ್ತವಾಗಿತ್ತು.
ಆದರೆ ಈ ಬಾರಿ ದರ್ಶನ್ ಪರ ವಕೀಲರ ವಾದಕ್ಕೆ ವಿಶೇಷ ಸರ್ಕಾರಿ ಅಭಿಯೋಜಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಕಳೆದ ಬಾರಿ ಬೆನ್ನು ನೋವಿನ ಕಾರಣ ನೀಡಿ ಜಾಮೀನು ಪಡೆದಿದ್ದ ದರ್ಶನ್, ಚಿಕಿತ್ಸೆ ಪಡೆಯುವುದಕ್ಕಿಂತ ಕಾರ್ಯಕ್ರಮಗಳು ಹಾಗೂ ಸಿನಿಮಾ ಚಿತ್ರೀಕರಣಗಳಲ್ಲಿ ಭಾಗವಹಿಸಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ಹೀಗಾಗಿ ಈ ಬಾರಿ ನ್ಯಾಯಾಲಯ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಚಿಕಿತ್ಸೆ ಪಡೆಯಲು ಅನುಮತಿ ನೀಡಿದರೂ ಜೈಲಿನಿಂದ ಹೊರಗೆ ತೆರಳಲು ಅವಕಾಶ ನೀಡಿಲ್ಲ. ದರ್ಶನ್ ಅವರ ಫಿಸಿಯೋಥೆರಪಿ ಚಿಕಿತ್ಸೆ ಜೈಲಿನ ಆವರಣದಲ್ಲಿಯೇ ನಡೆಯಲಿದೆ.