ಮುಂಬೈ: ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಕರ್ಣಾಟಕ ಬ್ಯಾಂಕ್‌ನ ನೂತನ ವ್ಯವಸ್ಥಾಪಕ ನಿರ್ದೇಶಕ (MD) ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಆಗಿ ಉದಯ ಕುಮಾರ್ ಹೆಬ್ಬಾರ್ ನೇಮಕಗೊಂಡಿದ್ದಾರೆ.
ಬ್ಯಾಂಕ್‌ನ ನಿರ್ದೇಶಕರ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಷೇರು ವಿನಿಮಯ ಕೇಂದ್ರಗಳಿಗೆ ಅಧಿಕೃತ ಮಾಹಿತಿ ನೀಡಲಾಗಿದೆ.
ಉದಯ ಕುಮಾರ್ ಹೆಬ್ಬಾರ್ ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಮೂರು ವರ್ಷಗಳ ಅವಧಿಗೆ ಈ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಹೆಚ್ಚುವರಿ ನಿರ್ದೇಶಕ, ಪೂರ್ಣಾವಧಿ ನಿರ್ದೇಶಕ ಹಾಗೂ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಈ ನೇಮಕಾತಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ನವೆಂಬರ್ 16ರಂದು ಅನುಮೋದನೆ ನೀಡಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ 40 ವರ್ಷಗಳಿಗೂ ಹೆಚ್ಚು ಅನುಭವ:
ಉದಯ ಕುಮಾರ್ ಹೆಬ್ಬಾರ್ ಅವರು ಬ್ಯಾಂಕಿಂಗ್ ಮತ್ತು ಹಣಕಾಸು ಸೇವಾ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. ತಮ್ಮ ವೃತ್ತಿಜೀವನವನ್ನು ಕಾರ್ಪೊರೇಷನ್ ಬ್ಯಾಂಕ್ ಮೂಲಕ ಆರಂಭಿಸಿದ ಅವರು, ಗ್ರಾಮೀಣ ಮತ್ತು ನಗರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
1995ರಲ್ಲಿ ಐಸಿಐಸಿಐ ಬ್ಯಾಂಕ್ ಸೇರಿದ ಅವರು, 12 ವರ್ಷಗಳ ಕಾಲ ಕಾರ್ಪೊರೇಟ್ ಕ್ರೆಡಿಟ್, ಪಾವತಿ ಕಾರ್ಯಾಚರಣೆ, ಗ್ರಾಮೀಣ ಮತ್ತು ಸೂಕ್ಷ್ಮ ಬ್ಯಾಂಕಿಂಗ್ ಹಾಗೂ ಕೃಷಿ ವ್ಯವಹಾರ ವಿಭಾಗಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. 2007ರಲ್ಲಿ ಬಾರ್ಕ್ಲೇಸ್ ಇಂಡಿಯಾದ ವಾಣಿಜ್ಯ ಮತ್ತು ಪಾವತಿ ಕಾರ್ಯಾಚರಣೆಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.
ಕ್ರೆಡಿಟ್‌ಆಕ್ಸೆಸ್ ಗ್ರಾಮೀಣ್ ಸಂಸ್ಥೆಯಲ್ಲೂ ಪ್ರಮುಖ ಪಾತ್ರ:
2010ರಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಯಾದ ಕ್ರೆಡಿಟ್‌ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್‌ಗೆ ಸಿಇಒ ಆಗಿ ಸೇರ್ಪಡೆಯಾದ ಹೆಬ್ಬಾರ್, 2015ರಲ್ಲಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಬಡ್ತಿ ಪಡೆದರು.
2018ರಲ್ಲಿ ಸಂಸ್ಥೆಯನ್ನು ಐಪಿಒ ಮೂಲಕ ಷೇರು ಮಾರುಕಟ್ಟೆಗೆ ಪರಿಚಯಿಸುವಲ್ಲಿ ಹಾಗೂ 2020ರಲ್ಲಿ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕ್ಯೂಐಪಿ ಮೂಲಕ ಬಂಡವಾಳ ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2025ರ ಜೂನ್ 25ರಂದು ಕಾರ್ಯನಿರ್ವಾಹಕ ಹುದ್ದೆಯಿಂದ ನಿವೃತ್ತರಾದ ಬಳಿಕ ಸಂಸ್ಥೆಯ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಮುಂದುವರಿದಿದ್ದರು.
ಕುಂದಾಪುರ ಮೂಲದ ಉದಯ ಕುಮಾರ್ ಹೆಬ್ಬಾರ್:
ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರಾದ ಉದಯ ಕುಮಾರ್ ಹೆಬ್ಬಾರ್ ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕರ್ಸ್‌ನ CAIIB ಅರ್ಹತೆಯನ್ನೂ ಹೊಂದಿದ್ದಾರೆ. ಅಲ್ಲದೆ, ಅಮೆರಿಕದ ವಾಂಡರ್‌ಬಿಲ್ಟ್ ವಿಶ್ವವಿದ್ಯಾಲಯ ಮತ್ತು BAI ಜಂಟಿಯಾಗಿ ನೀಡುವ ಬ್ಯಾಂಕಿಂಗ್ ಕಾರ್ಯಾಚರಣೆ ಹಾಗೂ ತಂತ್ರಜ್ಞಾನ ಪದವಿಯನ್ನು ಪೂರ್ಣಗೊಳಿಸಿದ್ದಾರೆ.
ನಾಲ್ಕು ದಶಕಗಳ ಬ್ಯಾಂಕಿಂಗ್ ಅನುಭವ ಹೊಂದಿರುವ ಉದಯ ಕುಮಾರ್ ಹೆಬ್ಬಾರ್ ಅವರ ನೇಮಕಾತಿ ಕರ್ಣಾಟಕ ಬ್ಯಾಂಕ್‌ನ ಮುಂದಿನ ಕಾರ್ಯತಂತ್ರ ಮತ್ತು ಬೆಳವಣಿಗೆಯ ದೃಷ್ಟಿಯಿಂದ ಮಹತ್ವ ಪಡೆದಿದೆ.