ನವದೆಹಲಿ: ವಿಶ್ವದ 50 ಅತ್ಯಂತ ಮಾಲಿನ್ಯಯುಕ್ತ ನಗರಗಳ ಪಟ್ಟಿಯಲ್ಲಿ ಭಾರತದ 49 ನಗರಗಳು ಸ್ಥಾನ ಪಡೆದಿವೆ. ರಾಜಸ್ಥಾನದ ಶ್ರೀಗಂಗಾನಗರ ವಿಶ್ವದಲ್ಲೇ ಅತ್ಯಂತ ಮಾಲಿನ್ಯಯುಕ್ತ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದು, ದೆಹಲಿ 24ನೇ ಸ್ಥಾನದಲ್ಲಿದೆ.
ವರದಿಯ ಪ್ರಕಾರ, ರಾಜಸ್ಥಾನದ ಶ್ರೀಗಂಗಾನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 821ಕ್ಕೆ ಏರಿಕೆಯಾಗಿದೆ. ಈ ಮೂಲಕ ನಗರವು ಜಾಗತಿಕ ಮಾಲಿನ್ಯ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಪಂಜಾಬ್ನ ಬಟಿಂಡಾ 629 ಎಕ್ಯೂಐನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಹರಿಯಾಣದ ಸಿರ್ಸಾ 544 ಎಕ್ಯೂಐನೊಂದಿಗೆ ಮೂರನೇ ಸ್ಥಾನದಲ್ಲಿದೆ.
ಇನ್ನು ಹರಿಯಾಣದ ಹಿಸಾರ್ನಲ್ಲಿ 516 ಹಾಗೂ ಪಂಜಾಬ್ನ ಫರೀದ್ಕೋಟ್ನಲ್ಲಿ 506 ಎಕ್ಯೂಐ ದಾಖಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ 393 ಎಕ್ಯೂಐನೊಂದಿಗೆ 24ನೇ ಸ್ಥಾನದಲ್ಲಿದೆ. ನವೆಂಬರ್ 9ರಂದು ದೆಹಲಿಯ ಎಕ್ಯೂಐ 663ಕ್ಕೆ ಏರಿಕೆಯಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಉತ್ತರ ಭಾರತದ ನಗರಗಳಲ್ಲಿ ವಾಯುಮಾಲಿನ್ಯ ಹೆಚ್ಚಳ

ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಹಲವು ನಗರಗಳಲ್ಲಿ ವಾಯುಮಾಲಿನ್ಯ ತೀವ್ರಗೊಂಡಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿತ ಹಾಗೂ ಕೃಷಿ ತ್ಯಾಜ್ಯ ಸುಡುವಿಕೆಯಿಂದ ವಾಯುಮಾಲಿನ್ಯ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಪಟ್ಟಿಯಲ್ಲಿರುವ ಭಾರತದ ಹೊರಗಿನ ಏಕೈಕ ನಗರ ಲಾಹೋರ್
ವಿಶ್ವದ 50 ಅತ್ಯಂತ ಮಾಲಿನ್ಯಯುಕ್ತ ನಗರಗಳ ಪಟ್ಟಿಯಲ್ಲಿ ಭಾರತದ ಹೊರಗಿನ ಏಕೈಕ ನಗರವಾಗಿ ಪಾಕಿಸ್ತಾನದ ಲಾಹೋರ್ ಸ್ಥಾನ ಪಡೆದಿದೆ. 430 ಎಕ್ಯೂಐ ದಾಖಲಿಸಿರುವ ಲಾಹೋರ್ 14ನೇ ಸ್ಥಾನದಲ್ಲಿದೆ.